Devaranama, Karuniso Ranga

Devaranama, Karuniso Ranga

Choreography: Deepthi Shree Bhat ಈ ನೃತ್ಯ ಸಂಯೋಜನೆಯಲ್ಲಿ ದೇವರು ಮತ್ತು ಪರಮಾತ್ಮ ಭಿನ್ನವೆಂಬುವುದರ ಬದಲಾಗಿ ಇಹದಲ್ಲಿಯೇ ಪರಮಾರ್ಥವನ್ನು ಕಾಣುವ ಪ್ರಯತ್ನವನ್ನು ಮಾಡಿದ್ದೇನೆ. "ಕರುಣಿಸೋ ರಂಗಾ ಕರುಣಿಸೋ" ಈ ಹಾಡು ದ್ವೈತ ಮತದ ಅನುಸಾರವಾಗಿದ್ದು ದೇವರು ಮತ್ತು ಜೀವಾತ್ಮರು ಭಿನ್ನವೆಂದು ಭಾವಿಸಿದಾಗ ವೇದ್ಯವಾಗುವಂತಹದ್ದು. ಪುರಂದರದಾಸರ ಪ್ರಸಿದ್ಧವಾದ ಈ ದೇವರನಾಮದಲ್ಲಿ, ಭಕ್ತನು ಹರಿಭಕ್ತಿಯಲ್ಲಿ ಶ್ರೇಷ್ಠರಾದವರೊಡನೆ ತನ್ನನ್ನು ತಾನು ತುಲನೆಮಾಡಿಕೊಂಡು, ತನಗೂ ಅವರಂತೆ ಹಗಲಿರುಳು ಹರಿಸ್ಮರಣೆ ಮಾಡುವ ಮನಸ್ಸುಕೊಡುವಂತೆ ಬೇಡುತ್ತಾನೆ. ತಾನು ಅವರಷ್ಟು ಸಮರ್ಥನಲ್ಲದಿದ್ದರೂ ತನ್ನನ್ನೂ ಸ್ವೀಕರಿಸು ಎಂದು ಅಂಗಲಾಚುತ್ತಾನೆ. ನೃತ್ಯ ಸಂಯೋಜನೆಯಲ್ಲಿ ಅದೇ ಭಕ್ತನು ಮುಂದೆ ತನ್ನವರಲ್ಲಿ, ತನ್ನ ಕೆಲಸದಲ್ಲಿ, ಕೊನೆಗೆ ಎಲ್ಲೆಲ್ಲೂ ಭಗವಂತನನ್ನು ಕಾಣುವ ಮೂಲಕ ಮನಸ್ಸಿನ ವಿಕಾಸವನ್ನು ಹೊಂದುತ್ತಾನೆ. ೦:೧೦-೧:೦೯ ಹಗಲಾಯಿತು, ಭಕ್ತೆಯು ಜಪಮಣಿಹಿಡಿದು ನಾಮಸ್ಮರಣೆಗೆ ಹೊರಟಾಗ, ಮಗುವಿನ ಅಳುವ ಧ್ವನಿ ಕೇಳಿಸುತ್ತದೆ, ತೊಟ್ಟಿಲು ತೂಗುತ್ತಿದ್ದಾಗ ಹಿರಿಯರೊಬ್ಬರು ಏನೋ ತಂದು ಕೊಡುವಂತೆ ಕೇಳುತ್ತಾರೆ, ಬೆಳಗಾದದ್ದನ್ನು ಕಂಡು ಗೃಹಶುಚಿಮಾಡಿ, ರಂಗೋಲಿ ಬರೆದು, ತುಳಸಿಗೆ ನೀರೆರೆದು, ಹಾಲುಕರೆದು, ಅಡಿಗೆಮಾಡಿ ... ಹೀಗೆಯೇ ಇರುಳಾಗಿ ಬಿಡುತ್ತದೆ. ೧:೧೦ - ೨:೧೦ ದಿನದಲ್ಲಿ ತಾನು ಒಂದುಬಾರಿಯೂ ಹರಿಯ ಸ್ಮರಣೆಮಾಡದ್ದನ್ನು ನೆನೆದು ದುಃಖಿಸುತ್ತಾಳೆ. ಹಗಲೂ ಇರುಳೂ ನಿನ್ನ ಸ್ಮರಣೆ ಒದಗುವಂತೆ ತನ್ನನ್ನು ಕರುಣಿಸು ಎಂದು ಹರಿಯನ್ನು ಪ್ರಾರ್ಥಿಸುತ್ತಾಳೆ. ೨:೧೧- ೨:೨೦ ರುಕುಮಾಂಗದನಂತೆ (ವಿಷ್ಣುವಿನ) ಏಕಾದಶಿಯಂದು ಹೆಣ್ಣಿನ ಮುಖನೋಡುವುದಿಲ್ಲವೆಂಬಷ್ಟು ಕಠಿಣ ವೃತವನ್ನು ಮಾಡಲು ತನ್ನಿಂದ ಸಾಧ್ಯವಿಲ್ಲ, ಶುಕಮುನಿಯಂತೆ ಪೂಜಿಸಲೂ ತನಗೆ ತಿಳಿದಿಲ್ಲ. ೨:೨೧ - ೨:೩೦ ರುಕುಮಾಂಗದನಂತೆ ವೃತಕ್ಕೆ ಅಡ್ಡಿಯಾದ ಮಗನನ್ನೇ ಕೊಲ್ಲುವ ಸಾಹಸ ತನ್ನಿಂದ ಸಾಧ್ಯವಿಲ್ಲ, ಶುಕಮುನಿಯಂತೆ ಪೂಜಿಸಲೂ ತನಗೆ ತಿಳಿದಿಲ್ಲ. ೨:೩೦ - ೨:೪೩ (ಬಕಾಸುರನ ವೈರಿ, ಅಂದರೆ ಭೀಮ. ಮಾಧ್ವಮತದಲ್ಲಿ ಹನುಮ-ಭೀಮ-ಮಾಧ್ವರು ವಾಯುದೇವರ ಅವತಾರವೆಂಬ ನಂಬಿಕೆ ಇದೆ. ಇಲ್ಲಿ, ಬಕವೈರಿ ಎಂದರೆ ಮಧ್ವಾಚಾರ್ಯರೆಂದು ಅರ್ಥಮಾಡಿಕೊಂಡಿದ್ದೇನೆ) ಬಕವೈರಿಯಂತೆ ಧ್ಯಾನವನ್ನು ಮಾಡಲು ತಿಳಿದಿಲ್ಲ. ಅವರಂತೆ ನೀನು ನಾನು ಭೇದವೆಂದು ಹೇಳುವಷ್ಟು ಜ್ಞಾನ ತನಗಿಲ್ಲ. ೨:೪೩- ದೇವಕಿಯಂತೆ ನಿನ್ನನ್ನು ಮುದ್ದಿಸಲೂ ತಿಳಿದಿಲ್ಲ. ಸಂಚಾರಿ ( ಬೆಳೆದು ನಿಂತ ಮಗನನ್ನು ಕಣ್ತುಂಬಿಕೊಳ್ಳುವ ದೇವಕಿಯು, ಅವನನ್ನು ಕುಳ್ಳಿರಿಸಿ, ಆ ಕಂಸನನ್ನು ಸಂಹರಿಸಿದೆಯಾ, ಮಗುವಾಗಿದ್ದಾಗ ನೋಡಿದ್ದೆ. ನೀನು ಬೆಳೆಯುವುದನ್ನು ನೋಡಲು ಸಾಧ್ಯವೇ ಆಗಲಿಲ್ಲ. ನನಗಿಂತಲೂ ಎತ್ತರವಾಗಿದ್ದೀಯ ಎನ್ನುತ್ತಾ ಯೋಗಕ್ಷೇಮ ವಿಚಾರಿಸುತ್ತಾಳೆ). ೩:೫೦ - ೪:೦೮ ಮತ್ತೆ ಭಕ್ತೆಯು ತನಗೂ ಹರಿಸ್ಮರಣೆ ಕೊಡುವಂತೆ ಹರಿಯಲ್ಲಿ ಪ್ರಾರ್ಥಿಸುತ್ತಾಳೆ. ಆದರೆ ಈ ಬಾರಿ ಹಸುಗಳನ್ನು ಕಂಡಾಗ, ಕೃಷ್ಣನೂ ಗೋಕುಲದಲ್ಲಿ ಗೋವುಗಳೊಡನೆಯೇ ಇದ್ದದ್ದನ್ನು ನೆನಪಿಸಿಕೊಳ್ಳುತ್ತಾಳೆ. ೪:೧೦ - ೪:೨೦ ಬಲಿಯಂತೆ ದಾನವನ್ನು ಕೊಡಲು ತಾನು ಅರಿಯೆ, ಪ್ರಹ್ಲಾದನಂತೆ ವಿಷ್ಣುವು ಎಲ್ಲೆಡೆಯೂ ಇದ್ದಾನೆಂದು ಹೇಳುವಷ್ಟು ಛಲವನ್ನೂ ಅರಿಯೆ. ೪:೨೧ - ೪:೩೦ ಬಲಿಯಂತೆ ಮೂರನೆಯ ಪಾದವಾಗಿ ಶಿರವನ್ನೇ ತೋರಿಸುವಷ್ಟು ದಾನದಲ್ಲಿ ಶ್ರೇಷ್ಠ ತಾನಲ್ಲ, ಭಕ್ತಿಯಿಂದ ನರಸಿಂಹನನ್ನೇ ಕರೆಯಿಸಿದ ಪ್ರಹ್ಲಾದನಂತೆ ಛಲವೂ ತನಗಿಲ್ಲ. ೪:೩೧ - ೪:೪೫ ಅರ್ಜುನನಂತೆ ನಿನ್ನ ಮಾತು ಕೇಳಿ(ಭಗವದ್ಗೀತಾ), ಯುದ್ಧಮಾಡಿ ನಿನ್ನನ್ನು ಒಲಿಸಿಕೊಂಡಂತೆ ತನಗೆ ಆ ಕೌಶಲವೂ ಇಲ್ಲ. ೪:೪೧ - ೫:೪೧ ಏನೂ ಇಲ್ಲದ ನನ್ನನ್ನು ಸಲಹು ಎಂದು ಪ್ರಾರ್ಥಿಸುವ ಭಕ್ತೆಯು, ತಾನೇನು ಮಾಡುತ್ತೇನೆಂದು ಆತ್ಮಾವಲೋಕನ ಮಾಡಿಕೊಳ್ಳುತ್ತಾಳೆ. ತನ್ನ ಪತಿಯ ಮಾತನ್ನು ಪಾಲಿಸುವುದು ಮಕ್ಕಳ ಶುಸ್ರೂಷೆಮಾಡುವುದು, ಇಷ್ಟೇ! ಎಂದು ಕ್ಷಣಕಾಲ ತನ್ನ ಬಗೆಯೇ ಸಿಟ್ಟುಗೊಂಡು ಮತ್ತೆ ಜಪಮಣಿ ಹಿಡಿದು ನಾಮಸ್ಮರಣೆ ಆರಂಭಿಸುತ್ತಾಳೆ. ತನ್ನ ಭಕ್ತಿಗೆ ಅಡ್ಡಿಯಾಗುವ ಮಗುವಿನ ಮೇಲೆ ಸಿಟ್ಟುಗೊಳ್ಳುತ್ತಾಳೆ. ಆದರೆ ಮರುಕ್ಷಣವೇ ಮಗುವನ್ನು ಕಂಡಾಗ, ಕೃಷ್ಣನೂ ಇದೇ ರೀತಿ ಇದ್ದಿರಬಹುದೇ ಎಂದುಕೊಳ್ಳುತ್ತಾಳೆ. ಆಗ, ತಾನಿದ್ದಲ್ಲಿ ತನ್ನವರಲ್ಲಿ ಕೃಷ್ಣನನ್ನು ಕಾಣಲು ಶುರುಮಾಡುತ್ತಾಳೆ. ತನ್ನ ಮಕ್ಕಳನ್ನು ಕರೆದು ಮುದ್ದಿಸುತ್ತಾಳೆ, ಪತಿಯಲ್ಲೋ ಕೃಷ್ಣನನ್ನು ಕಾಣುತ್ತಾಳೆ, ಎಲ್ಲೆಲ್ಲೂ ಕೃಷ್ಣನನ್ನೇ ಕಾಣುತ್ತಾಳೆ. ದೇವರು ಬೇರೆಲ್ಲೂ ಇಲ್ಲ, ನಮ್ಮವರಲ್ಲಿ, ನಮ್ಮ ಸುತ್ತಲೂ ಇದ್ದಾನೆ ಎಂದು ತಿಳಿದುಕೊಳ್ಳುತ್ತಾಳೆ. Venue: Sava Sadan, Malleshwaram Video courtesy: https://shaale.com This song is chosen from Ananya Bengaluru's Nrithya Sangeeta Album. Vocal: Smt. Deepthi Srinath Natuvanga: Vid. D. V. Prasanna Kumar Mrudanga: Vid. P. Janardhana Rao Flute: Vid K S Jayaraman Rhythm Pad: Vid. Pradyumna S G