ಒಂದೆರೆಡು ದಿನಗಳಲ್ಲಿ ಜೂಜಾಟ ನಿಷೇಧ ತಿದ್ದುಪಡಿ ಮಸೂದೆ ಮಂಡನೆ

ಒಂದೆರೆಡು ದಿನಗಳಲ್ಲಿ ಜೂಜಾಟ ನಿಷೇಧ ತಿದ್ದುಪಡಿ ಮಸೂದೆ ಮಂಡನೆ

ಆನ್ ಲೈನ್ ಸೇರಿದಂತೆ ವಿವಿಧ ಬಗೆಯ ಜೂಜಾಟ ನಿಷೇಧಗೊಳಿಸುವ ತಿದ್ದುಪಡಿ ಮಸೂದೆ ಒಂದೆರಡು ದಿನಗಳಲ್ಲಿ ವಿಧಾನಮಂಡಲದಲ್ಲಿ ಮಂಡನೆಯಾಗುತ್ತಿದ್ದು, ಜೂಜಿನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿಂದು ಹೇಳಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಜೂಜಾಟ ನಿಷೇಧ ಕಾಯ್ದೆ ಜಾರಿಗೆ ಸರ್ಕಾರ ತೀರ್ಮಾನ ಕೈಗೊಂಡಿದೆ. 1961ರ ಪೋಲೀಸ್ ವ್ಯವಸ್ಥೆಗೆ ತಿದ್ದುಪಡಿ ತರಲಾಗುವುದು. ಹೊಸ ಕಾನೂನು ರೂಪಿಸುವ ಸಂದರ್ಭದಲ್ಲಿ ಸದನದ ಸದಸ್ಯರು ಸೂಕ್ತ ರೀತಿಯ ಸಲಹೆ- ಸೂಚನೆಗಳನ್ನು ನೀಡಬೇಕೆಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ, ಜೂಜಾಟ ನಿಯಂತ್ರಿಸುವ ವಿಷಯದಲ್ಲಿ ಸೂಕ್ತ ಕಾನೂನು ರೂಪಿಸುವ ಅಗತ್ಯವಿದೆ. ಜೂಜಾಟದಲ್ಲಿ ಭಾಗಿಯಾಗಿ ಬಂಧನಕ್ಕೊಳಗಾಗುವರು ಒಂದೆರಡು ದಿನಗಳಲ್ಲಿ ಜಾಮೀನು ಪಡೆದು ಹೊರಬರುತ್ತಾರೆ. ಇದರಿಂದಾಗಿ ಯಾರೂ ಇಂತಹ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹೀಗಾಗಿ ಕಠಿಣ ಕಾನೂನು ಜಾರಿ ಅಗತ್ಯ ಎಂದು ಹೇಳಿದರು. ಬೆಂಗಳೂರು ಒಳಗೊಂಡಂತೆ ನಗರ ಪ್ರದೇಶಗಳಲ್ಲಿ ಅಭಿವೃದ್ಧಿ ಹಕ್ಕು - ಟಿಡಿಆರ್ ನಿಯಮಾವಳಿಗಳಲ್ಲಿ ಸರಳೀಕರಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಅವರು, ಟಿಡಿಆರ್ ವ್ಯವಸ್ಥೆಯಲ್ಲಿ ಕೆಲವು ಗೊಂದಲಗಳಿದ್ದು, ಇವುಗಳಿಗೆ ಪರಿಹಾರ ಕಂಡು ಹಿಡಿಯಲು ಸರ್ಕಾರ ಕಾರ್ಯೋನ್ಮುಖವಾಗಿದೆ. ಇಂತಹ ವ್ಯವಸ್ಥೆಯಿಂದಲೇ ನಗರ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯ. ಹೀಗಾಗಿ ಟಿಡಿಆರ್ ವ್ಯವಸ್ಥೆ ವ್ಯಾಪಾರ ಕೇಂದ್ರವಾಗದೆ, ಭೂಮಿ, ನಿವೇಶನಗಳನ್ನು ಕಳೆದುಕೊಂಡವರಿಗೆ ಸೂಕ್ತ ರೀತಿಯಲ್ಲಿ ನೆರವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ತೋಟಗಾರಿಕಾ ಇಲಾಖೆಯಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರ್ಪಡೆ ಮಾಡಲು ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಕಾರ್ಮಿಕ ಸಚಿವ ಅರಬೈಲು ಶಿವರಾಮ ಹೆಬ್ಬಾರ್ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಸಚಿವರು, ಇತ್ತೀಚೆಗೆ ಕೇಂದ್ರ ಸರ್ಕಾರ ಇ-ಶ್ರಮ್ ಯೋಜನೆಯನ್ನು ಜಾರಿಗೊಳಿಸಿದ್ದು, ಇದರಡಿ 144 ವಿವಿಧ ವಲಯದ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರೆಂದು ಘೋಷಿಸಿದ್ದು, ಇದರಡಿ ತೋಟಗಾರಿಕಾ ಕಾರ್ಮಿಕರು ಸಹ ಬರುತ್ತಾರೆ. ಇವರಿಗೆ ಶೀಘ್ರದಲ್ಲೇ ಮಾನ್ಯತೆ ನೀಡಿ, ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಆದರೆ ಕಟ್ಟಡ ಹಾಗೂ ಇತರೆ ನಿರ್ಮಾಣ ವಲಯದ ಕಾರ್ಮಿಕರಿಗೆ ದೊರಕುವ ಸೌಲಭ್ಯಗಳನ್ನು ತೋಟಗಾರಿಕಾ ಕಾರ್ಮಿಕರಿಗೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಬಳಿಕ ಶೂನ್ಯವೇಳೆಯಲ್ಲಿ ಮಕ್ಕಳಲ್ಲಿ ಕಂಡು ಬರುತ್ತಿರುವ ಜ್ವರ, ಡೆಂಘೀ ಜ್ವರ ಮತ್ತಿತರ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸುವ ಉದ್ದೇಶದಿಂದ ವಿವಿಧ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗಾಗಿ ಹೆಚ್ಚುವರಿ ಬೆಡ್ ಗಳ ವ್ಯವಸ್ಥೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು. ರಾಯಚೂರು ಸೇರಿದಂತೆ ಕೆಲವೆಡೆ ಹೆಚ್ಚಿನ ಪ್ರಮಾಣದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿವೆ. ಆದರೆ ಆತಂಕಪಡುವ ಅಗತ್ಯವಿಲ್ಲ. ಆಗಸ್ಟ್ ನಿಂದ ಸೆಪ್ಟೆಂಬರ್ ವರೆಗೆ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ. 6 ಸಾವಿರದ 281 ಮಕ್ಕಳನ್ನು ತಪಾಸಣೆ ಮಾಡಲಾಗಿದ್ದು, 13 ಮಕ್ಕಳಲ್ಲಿ ಡೆಂಘೀ ಜ್ವರ ಕಂಡು ಬಂದಿದೆ. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಶೇಕಡ 20ರಷ್ಟು ಹಾಸಿಗೆಗಳನ್ನು ಮಕ್ಕಳಿಗಾಗಿ ಮೀಸಲಿಡಲಾಗಿದೆ. ಅಗತ್ಯ ಕಂಡು ಬಂದಲ್ಲಿ ಮತ್ತಷ್ಟು ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು ಎಂದರು. ಇದಕ್ಕೂ ಮುನ್ನ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಆದ್ಯತೆ ನೀಡಬೇಕು. ರಾಯಚೂರು ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಕಂಡು ಬಂದಿದೆ. ರಾಜ್ಯದ ಎಲ್ಲ ಭಾಗಗಳಲ್ಲೂ ಸೂಕ್ತ ರೀತಿಯಲ್ಲಿ ಹಾಸಿಗೆಗಳು ದೊರೆಯುವಂತೆ ಮಾಡಬೇಕು ಎಂದು ಸಲಹೆ ಮಾಡಿದರು.